ಚೆನ್ನಕೇಶವಯ್ಯ ಎನ್

1895 ಕರ್ಣಾಟಕ ಸಂಗೀತ ವಿದ್ವಾಂಸರು. ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ನಾಟಹಳ್ಳಿಯಲ್ಲಿ ಜನಿಸಿದರು. ತಂದೆ ಕೇಶವಯ್ಯ, ತಾಯಿ ಲಕ್ಷ್ಮೀದೇವಮ್ಮ. ಹೇಮಾವತಿ ನದೀ ತೀರದ ಪ್ರಶಾಂತ ವಾತಾವರಣದಲ್ಲಿ ವಾಸ ಮಾಡುತ್ತಿದ್ದ ಕೇಶವಯ್ಯನವರು ಸಂಗೀತದಲ್ಲಿ ತಕ್ಕಮಟ್ಟಿನ ಸಾಧನೆ ನಡೆಸಿದ್ದರು. ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದ ಇವರು ಭಾರತವಾಚನದಲ್ಲೂ ವಿಶೇಷವಾದ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ಸಂಗೀತಪ್ರೇಮದಿಂದ ಸುತ್ತಣ ಜನರ ಪ್ರೀತಿ ವಿಶ್ವಾಸಗಳಿಸಿದ್ದ ಕೇಶವಯ್ಯನವರು ಸಂಗೀತದ ಸಣ್ಣಪ್ಪನವರೆಂದು ಪ್ರಸಿದ್ಧರಾಗಿದ್ದರು. ತಾಯಿ ಲಕ್ಷ್ಮೀದೇವಮ್ಮನವರೂ ಸಂಗೀತಪ್ರಿಯೆ. ತಾಯಿ ತುಂಬಿದ ಭಕ್ತಿಭಾವದಿಂದ ದೇವರನಾಮಗಳನ್ನು ಹಾಡುತ್ತಿದ್ದರು. ತಂದೆ ತಾಯಿಗಳ ಸಂಗೀತದ ಒಲುಮೆ ಚಿಕ್ಕಂದಿನಲ್ಲಿಯೇ ಇವರ ಮೇಲೆ ಪ್ರಭಾವ ಬೀರಿತು. 

	ಇವರು ಲೋಯರ್ ಸೆಕೆಂಡರಿ (1909) ಪರೀಕ್ಷೆಯನ್ನು ಮುಗಿಸಿ ಮೈಸೂರಿಲ್ಲಿ ವ್ಯಾಸಂಗ ಮುಂದುವರಿಸಿ ಅಪ್ಪರ್ ಸೆಕೆಂಡರಿ (1912), ಉಪಾಧ್ಯಾಯ ತರಬೇತಿ (1914), ಡ್ರಾಯಿಂಗ್ ಡಿಪ್ಲೋಮಾ, ವ್ಯವಸಾಯ ಮತ್ತು ಪಶುವೈದ್ಯ ತರಬೇತಿ ಪರೀಕ್ಷೆಗಳಲ್ಲೂ ಜಯಶೀಲರಾದರು. ಸಂಗೀತವೇ ಇವರ ಬಾಳಿನ ಸಕಲವಾಗಿತ್ತಾದರೂ ಜೀವನಕ್ಕೆ ಬೇರೆ ವೃತ್ತಿಯನ್ನವಲಂಬಿಸಿ ಸಂಗೀತ ಸಾಧನೆಯನ್ನು ಸ್ವಂತ ಸುಖಕ್ಕಾಗಿ ಮುಂದುವರಿಸಬೇಕೆಂಬುದು ಇವರ ಅಭಿಲಾಷೆಯಾಗಿತ್ತು. ಇದಕ್ಕಾಗಿ ಇವರು ಮೈಸೂರಿನಲ್ಲಿ ವೈಣಿಕ ವಿದ್ವಾನ್ ಶಿವರಾಮಯ್ಯನವರಲ್ಲಿ ನಾಲ್ಕು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದರು. ಶಿವರಾಮಯ್ಯನವರ ತಂದೆಯವರಾದ ಪದ್ಮನಾಭಯ್ಯನವರು ಮೈಸೂರು ವಾಸುದೇವಾಚಾರ್ಯರ ಗುರುಗಳಾಗಿದ್ದುದರಿಂದ ಇವರ ಸಂಗೀತಕ್ಕೂ ವಾಸುದೇವಚಾರ್ಯರದಕ್ಕೂ ಇರುವ ಸಾಮ್ಯವನ್ನು ಗುರುತಿಸಬಹುದು. ಪ್ರತಿಯೊಂದು ಗಮಕವೂ ಸರಿಯಾದ ಪ್ರಮಾಣದಲ್ಲಿರುವಂತೆ ಶ್ರುತಿಪೂರ್ಣವಾದ ಭಾವಭರಿತವಾದ ಪ್ರಶಾಂತ ಮನಸ್ಕವಾದ ಹಾಡುಗಾರಿಕೆಗೆ ಇವರು ಪ್ರಸಿದ್ಧರಾಗಿದ್ದರು.

	ಶಿವರಾಮಯ್ಯನವರ ಮನೆಯಲ್ಲಿ ಪ್ರತಿ ಏಕಾದಶಿಯಂದು ನಡೆಯುತ್ತಿದ್ದ ಭಜನೆಯಲ್ಲಿ ವಾಸುದೇವಾಚಾರ್ಯರೂ ಭಾಗವಹಿಸುತ್ತಿದ್ದರು. ಚೆನ್ನಕೇಶವಯ್ಯನವರು ಅವರ ಹಾಡುಗಾರಿಕೆಯಿಂದ ಪ್ರಭಾವಿತರಾದರಲ್ಲದೆ. ಅವರಲ್ಲೂ ಅಭ್ಯಾಸ ಮಾಡಿದರು. ಶಿವರಾಮಯ್ಯನವರಿಂದ ಸಂಗೀತದ ಲಕ್ಷ್ಯ ಹಾಗೂ ಲಕ್ಷಣದ ಖಚಿತ ನಿರ್ಣಯe್ಞÁನ ಪಡೆದಿದ್ದ ಚೆನ್ನಕೇಶವಯ್ಯನವರು ವಾಸುದೇವಾಚಾರ್ಯರ ನಿಕಟ ಸಹವರ್ತಿಯಾಗಿ ಹಲವು ವರ್ಷಗಳ ಕಾಲ ಸಾಧನೆ ಮಾಡಿದರಲ್ಲದೆ, ಆಚಾರ್ಯರ ಕೃತಿಗಳನ್ನು ಸ್ವರಸಹಿತ ಬರೆದು ಅವುಗಳ ಸಂಕಲನದ ಪ್ರಕಟನೆಯಲ್ಲಿ ನೆರವಾದರು. ವಾಸುದೇವಾಚಾರ್ಯರು ತಮ್ಮ ಹೊಸ ಕೃತಿಗಳನ್ನು ಚೆನ್ನಕೇಶವಯ್ಯನವರಿಗೆ ಹೇಳಿ ಅವರಿಂದ ಬರೆಯಿಸುತ್ತಿದ್ದರು. ಚೆನ್ನಕೇಶವಯ್ಯನವರು ಈ ಕೆಲಸವನ್ನು ಮುಂದುವರಿಸಿ ಅನೇಕ ಅಪೂರ್ವ ಕೃತಿಗಳನ್ನು ಸಂಗ್ರಹಿಸಿದರು.

	ಚೆನ್ನಕೇಶವಯ್ಯವನವರು ಮೈಸೂರಿನಲ್ಲಿ ಶಾರದಾವಿಲಾಸ ಶಾಲೆಯಲ್ಲಿ ಉಪಾಧ್ಯಾಯರಾದರು. ಉದ್ಯೋಗದ ವೇಳೆ ಬಿಟ್ಟು ಇವರ ದಿನದ ಉಳಿದ ಕಾಲವೆಲ್ಲ ಸಂಗೀತಕ್ಕೆ ಮೀಸಲಾಯಿತು. ದೇಶದ ಅನೇಕ ಕಡೆಗಳಲ್ಲಿ ಇವರ ಕಚೇರಿಗಳು ಏರ್ಪಡುತ್ತಿದ್ದವು. ತಮ್ಮ ಬಿಡುವಿನ ವೇಳೆಯಲ್ಲಿ ಇವರು ಅನೇಕ ಶಿಷ್ಯರಿಗೆ ಪಾಠ ಹೇಳಿಕೊಟ್ಟರು. ಅವರಲ್ಲಿ ಅನೇಕರು ಸುಪ್ರಸಿದ್ಧ ಸಂಗೀತಗಾರರಾಗಿದ್ದಾರೆ.

	ಚೆನ್ನಕೇಶವಯ್ಯನವರು 1944ರಲ್ಲಿ ಮೈಸೂರಿನ ಆಸ್ಥಾನ ವಿದ್ವಾಂಸರಾದರು. ಜಯಚಾಮರಾಜರು ರಚಿಸಿದ ತೊಂಬತ್ತಾರು ಕೀರ್ತನೆಗಳನ್ನು ಇವರು ಮಹಾರಾಜರ ಸಮ್ಮುಖದಲ್ಲಿ ಹಾಡಿದರಲ್ಲದೆ ಅವನ್ನು ಚಿಟ್ಟೆಸ್ವರ ಸಹಿತ ಬರೆದಿಟ್ಟರು. ಮೈಸೂರಿನಲ್ಲಿ ಸೇರಿದ್ದ ಸಂಗೀತ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು (1963). ಆ ಸಮಯದಲ್ಲಿ ಇವರಿಗೆ ಗಾನಕಲಾಸಿಂಧು ಎಂಬ ಪ್ರಶಸ್ತಿ ದೊರಕಿತು. ಸಂಗೀತ ಕಲಾರತ್ನ, ಸಂಗೀತ ವಿದ್ಯಾನಿಧಿ ಇವರಿಗೆ ದೊರೆತಿದ್ದ ಇತರ ಬಿರುದುಗಳು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರಾಪ್ತವಾದ್ದು 1972ರಲ್ಲಿ.

	ಹಾಡುಗಾರಿಕೆಯ ಜೊತೆಗೆ ಸಂಶೋಧನ ಪ್ರವೃತ್ತಿಯೂ ಚೆನ್ನಕೇಶವಯ್ಯನವರಲ್ಲಿ ಬೆಳೆದುಬಂದಿದೆ. ವಾಸುದೇವಾಚಾರ್ಯ ಹಾಗೂ ಜಯಚಾಮರಾಜ ಒಡೆಯರ ಕೃತಿಗಳಲ್ಲದೆ ಇವರು ಮೈಸೂರು ಸದಾಶಿವರಾಯರು, ಚಿಂತಲಪಲ್ಲಿ ವೆಂಕಟರಾಯರ ತಾತಂದಿರಾದ ಗವಿರಂಗದಾಸರು ಮೊದಲಾದ ಅನೇಕ ವಾಗ್ಗೇಯಕಾರರ ಕೃತಿಗಳನ್ನು ಸ್ವರಪಡಿಸಿ ಬರೆದಿಟ್ಟಿದ್ದಾರೆ. ಹರಿದಾಸ ಕೀರ್ತನಸುಧಾಸಾಗರ ಎಂಬುದು ಚೆನ್ನಕೇಶವಯ್ಯನವರ ಮಹತ್ತರ ಕೃತಿ. ಇದಲ್ಲದೆ ಇವರು ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಕೆಲವನ್ನು ಪ್ರಕಟಿಸಿದ್ದಾರೆ. ವೀಣೆ ಸುಬ್ಬಣ್ಣನವರ ಜೀವನ ಸಾಧನೆಗಳನ್ನು ಕುರಿತ ಪುಸ್ತಕ ರಚಿಸಿದ್ದಾರೆ. ಆಲಾಪನಾ ಪದ್ಧತಿ, ತಾನ ಮತ್ತು ಪಲ್ಲವಿ ಎಂಬುದು ಇವರ ಇನ್ನೊಂದು ಕೃತಿ.                     					 (ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ